ದೈಜು ಎಂಬ ವಿದ್ಯಾರ್ಥಿ ಬಾಸೋ ಎಂಬ ಜ಼ೆನ್ ಗುರುವಿನ ಬಳಿ ಹೋದ. ತನ್ನನ್ನು ಭೇಟಿ ಆಗುವುದಕ್ಕೆ ಬಂದವರ ಬಳಿ ಮಾಮೂಲಿಯಾಗಿಕೇಳುವಂತೆಯೇ ಆತ ದೈಜುವಿನ ಬಳಿಯೂ ಕೇಳಿದ “ಏನನ್ನು ಹುಡುಕುತ್ತಿದ್ದಿ?”

ದೈಜು ಅಚಲವಾಗಿ ಉತ್ತರಿಸಿದ, “ಜ್ಞಾನೋದಯ”. 

“ನಿಧಿಯ ಭಂಡಾರ ನಿನ್ನ ಒಳಗೇ ಇದೆ. ಹೊರಗಡೆ ಯಾಕೆ ಹುಡುಕುತ್ತೀಯಾ?” ಎಂದ ಗುರು ಬಾಸೋ! 

“ನನ್ನ ನಿಧಿಯ ಭಂಡಾರ ಎಲ್ಲಿದೆ?” ಗೊಂದಲದಿಂದ ಮರುಪ್ರಶ್ನೆ ಬಂತು ಶಿಷ್ಯನಿಂದ. 

“ನೀನು ಏನು ಕೇಳುತ್ತಿದ್ದೀಯೋ, ಅದೇ ನಿನ್ನ ನಿಧಿಯ ಭಂಡಾರ” ಎಂದ ಗುರು. 

ದೈಜುಗೆ ಜ್ಞಾನೋದಯವಾಯ್ತು. ಆ ನಂತರ ಆತ ತನ್ನ ಸ್ನೇಹಿತರಿಗೆಲ್ಲಾ “ನಿಮ್ಮ ನಿಧಿಯ ಭಂಡಾರವನ್ನು ತೆರೆಯಿರಿ. ಮತ್ತು ಅವನ್ನು ನಿಮ್ಮ ಒಳಿತಿಗೆಬಳಸಿಕೊಳ್ಳಿ” ಎಂದು ಹೇಳತೊಡಗಿದ. 

ನಮ್ಮಲ್ಲಿ ಅನೇಕರು ಮಾಡುವ ತಪ್ಪು ಏನೆಂದರೆ, ತಮ್ಮ ಒಳಗಿರುವ ಶಕ್ತಿಯ ಕುರಿತು ಸರಿಯಾಗಿ ಅರಿಯದಿರುವುದು. ನಮ್ಮ ಜೀವನದಲ್ಲಿ ಬರುವಅನೇಕ ಸಮಸ್ಯೆಗಳನ್ನು ನಾವೇ ಪರಿಹರಿಸಿಕೊಳ್ಳಲು ಸಾಧ್ಯವಿದೆ. ಆದರೆ ಹೆಚ್ಚಿನ ಬಾರಿ ನಾವು ನಮ್ಮಲ್ಲಿರುವ ಸಂಪನ್ಮೂಲವನ್ನು ಗುರುತಿಸುವಲ್ಲಿಹಿಂದುಳಿಯುತ್ತೇವೆ. 

ನಮ್ಮ ಕಷ್ಟಗಳಿಗೆ, ನಮ್ಮ ಸಮಸ್ಯೆಗಳಿಗೆ ಹೊರಗಿನ ಕಾರಣಗಳನ್ನು ಹುಡುಕುತ್ತಿರುತ್ತೇವೆ ಹೊರಗಿನಿಂದಲೇ ಪರಿಹಾರಗಳು ಬರಲಿ ಎಂದುಕಾಯುತ್ತಿರುತ್ತೇವೆ. 

ಇಂತಹ ಪರಿಸ್ಥಿತಿಗೆ ಒಂದು ಮುಖ್ಯ ಕಾರಣ ಎಂದರೆ, “ನಾವು ಯಾರು” ಎಂಬುದು ನಮಗೇ ಗೊತ್ತಿಲ್ಲದಿರುವುದು! ನಮ್ಮಲ್ಲಿ ಇರುವ ಶಕ್ತಿಗಳೇನುಎಂಬುದೇ ನಮಗೆ ಗೊತ್ತಿರುವುದಿಲ್ಲ. ನಮ್ಮಲ್ಲಿರುವ ಸಂಪನ್ಮೂಲಗಳೇನು ಎಂಬುದೂ ನಮಗೆ ತಿಳಿದಿರುವುದಿಲ್ಲ. ಇದರ ಜೊತೆಗೆ ನಾವು ನಮ್ಮ ಬಗ್ಗೆಸ್ವಲ್ಪ ಕೀಳರಿಮೆಯನ್ನು ಇಟ್ಟುಕೊಂಡು, ನಿರ್ಧಾರ ತೆಗೆದುಕೊಳ್ಳಲು  ಇತರರು ನಮಗಿಂತ ಹೆಚ್ಚು ಸೂಕ್ತರು ಅನ್ನುವ ಕಲ್ಪನೆಯಲ್ಲೂ ನಾವು ಇರುತ್ತೇವೆ. 

ಹಾಗಿದ್ದರೆ ಇತರರಿಂದ ಸಹಾಯ ಪಡೆಯುವುದು ತಪ್ಪೇ? 

ಖಂಡಿತವಾಗಿಯೂ ಅಲ್ಲ! ಮಾನಸಿಕ ಸಮಸ್ಯೆ ಇದ್ದಾಗ ಮಾನಸಿಕ ತಜ್ಞರ ಬಳಿ ಹೋಗುತ್ತೇವೆ. ಅನಾರೋಗ್ಯ ಉಂಟಾದಾಗ ವೈದ್ಯರ ಬಳಿಗೆಹೋಗುತ್ತೇವೆ. ವಿದ್ಯೆ ಕಲಿಯಲು ನಾವು ಗುರುವಿನ ಬಳಿ ಹೋಗುತ್ತೇವೆ. ಸಹಾಯವನ್ನೂ ಪಡೆಯುತ್ತೇವೆ. ಆದರೆ ಎಷ್ಟೋ ಬಾರಿ ಏನಾಗುತ್ತದೆ, ಸಹಾಯ ಕೊಡುವವರು, ಸಹಾಯದ ಹೆಸರಿನಲ್ಲಿ ತಾವೇ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ತೊಡಗುತ್ತಾರೆ. ಹಾಗಾದಾಗ, ವ್ಯಕ್ತಿಗೆ ತನ್ನಸಾಮರ್ಥ್ಯವನ್ನು ಅರಿಯುವ ಅವಕಾಶ ಸಿಗುವುದಿಲ್ಲ. ಆದ್ದರಿಂದ ನಮಗೆ ಸಹಾಯ ಬೇಕಾಗಿರುವುದು ಸಮಸ್ಯೆಗಳನ್ನು ಅಥವಾ ಕಷ್ಟಗಳನ್ನುಪರಿಹರಿಸುವುದಕ್ಕಲ್ಲ! ಬದಲಾಗಿ ಅವುಗಳನ್ನು ಪರಿಹರಿಸುವ ನಮ್ಮೊಳಗಿನ ಶಕ್ತಿಯನ್ನು ಹೊರತೆಗೆಯುವುದಕ್ಕಾಗಿ. ಯಾವಾಗ ನಮಗೆ ಅಂತಹಸಹಾಯ ಸಿಗುತ್ತದೋ, ಆವಾಗ ನಾವು ಮುಂದೆಯೂ ಅಂತಹ ಸಮಸ್ಯೆಗಳು ಬಂದಾಗ ಅವುಗಳನ್ನು ಎದುರಿಸುವುದಕ್ಕೆ ಶಕ್ತರಾಗುತ್ತೇವೆ. ಅಲ್ಲದೆ, ನಮ್ಮ ಸಮಸ್ಯೆಗೆ ಅತೀ ಹೆಚ್ಚು ಸರಿಯಾದ ಪರಿಹಾರ ನಮ್ಮಿಂದಲೇ ಕೊಟ್ಟುಕೊಳ್ಳಲು ಸಾಧ್ಯ. ಯಾಕೆಂದರೆ, ಪರಿಸ್ಥಿತಿಯ ಸಂಪೂರ್ಣ ಅರಿವುನಮಗಿದ್ದಷ್ಟು ಇತರರಿಗಿರಲು ಸಾಧ್ಯವಿಲ್ಲ. ಆ ಸಂಪೂರ್ಣ ಅರಿವಿಲ್ಲದೆ ಸೂಕ್ತ ಪರಿಹಾರವೂ ಸಾಧ್ಯವಿಲ್ಲ. 

ಒಂದು ವೇಳೆ ಆ ರೀತಿಯಲ್ಲಿ ಸಹಾಯ ಮಾಡುವವರಿಲ್ಲದಿದ್ದರೆ ಏನು ಮಾಡುವುದು? 

ಉತ್ತರ ಬಹಳ ಸುಲಭ. ಆ ಸಹಾಯ ಮಾಡಬಲ್ಲವನು ನಿಮ್ಮೊಳಗೆ ಇದ್ದಾನೆ. ಆತನನ್ನು ಹುಡುಕುವುದಷ್ಟೇ ಬಾಕಿ. ಪ್ರತಿಯೊಬ್ಬ ವ್ಯಕ್ತಿಗೂ ಸ್ವತಃಆತನೇ ಸಹಾಯಕನಾಗಿರುತ್ತಾನೆ. ನಮ್ಮ ಕಷ್ಟದ ಸಂದರ್ಭದಲ್ಲಿ ನಮಗೆ ಯಾರೂ ಸಹಾಯಕ್ಕೆ ಇಲ್ಲದಿದ್ದರೂ, ನಾವೇ ಸ್ವತಃ ನಮ್ಮನ್ನುಆಧರಿಸಿಕೊಳ್ಳಬಹುದು. ಅದು ನಮ್ಮ ಮನಸ್ಸಿನ ಶಕ್ತಿ. ಅದನ್ನು ನಮಗೆ ಹುಡುಕಿಕೊಳ್ಳುವುದಕ್ಕೆ ಸಾಧ್ಯವಾದರೆ, ಆವಾಗ ನಾವು ಇನ್ಯಾರೋ ಬಂದುನಮ್ಮನ್ನು ಮೇಲೆತ್ತಲಿ, ಸಹಾಯ ಮಾಡಲಿ ಎಂದೆಲ್ಲಾ ಕಾಯುವ ಪರಿಸ್ಥಿತಿಯೇ ಬರುವುದಿಲ್ಲ. ನಾವೇ ನಮ್ಮ ವಾಹನದ ಚಾಲಕರಾಗಿ ನಮಗೆಸೂಕ್ತವೆನಿಸಿದ ಮಾರ್ಗದಲ್ಲಿ ಚಲಾಯಿಸಬಹುದು. 

 

ಅಕ್ಷರ ದಾಮ್ಲೆ
ಮಾನಸಿಕ ತಜ್ಞ