ಬಾಂಕೈ ಎನ್ನುವ ಜ಼ೆನ್ ಗುರುವಿನ ಭಾಷಣವನ್ನು ಕೇಳಲು ಜ಼ೆನ್ ವಿದ್ಯಾರ್ಥಿಗಳಷ್ಟೇ ಅಲ್ಲದೆ ಇತರರೂ ಬರುತ್ತಿದ್ದರು. ಆತನ ಭಾಷಣದ ವಿಶಿಷ್ಟತೆಏನಿತ್ತು ಅಂದರೆ, ಆತ ಯಾವುದೇ ಸೂತ್ರಗಳ ಕುರಿತು ಅಥವಾ ಇನ್ಯಾವುದೋ ತತ್ವ ಸಿದ್ಧಾಂತಗಳ ಕುರಿತು ಮಾತನಾಡದೆ, ತನ್ನ ಹೃದಯದಿಂದಮಾತನಾಡುತ್ತಿದ್ದ. ಅದು ನೇರವಾಗಿ ಕೇಳುಗರ ಹೃದಯಕ್ಕೆ ನಾಟುವಂತಿರುತ್ತಿತ್ತು. ಹಾಗಾಗಿ ಆತನ ಸಭಿಕರಲ್ಲಿ ಮೇಲ್ವರ್ಗದವರು, ಕೆಳವರ್ಗದವರುಎಂಬ ಯಾವುದೇ ಭೇದವಿಲ್ಲದೆ ಎಲ್ಲರೂ ಇರುತ್ತಿದ್ದರು. ಒಂದು ದಿನ ಈ ವಿಚಾರ ಇನ್ನೊಬ್ಬ ಗುರುವಿಗೆ ಬಹಳ ಕೋಪವನ್ನು ಉಂಟುಮಾಡಿತು. ಆತನಶಿಷ್ಯಂದಿರೂ ಕೂಡಾ ಬಾಂಕೈಯ ಭಾಷಣವನ್ನು ಕೇಳಲು ತೆರಳಿದ್ದರು. ಹಾಗಾಗಿ ಆತ ತಾನೇ ಬಾಂಕೈ ಭಾಷಣ ಮಾಡುತ್ತಿರುವ ಸಭೆಗೆ ಹೋಗಿಆತನನ್ನು ಎದುರಿಸಲು ಯೋಚಿಸಿದ. 

ಅಲ್ಲಿಗೆ ಹೋಗಿ, “ಹೇ ಜ಼ೆನ್ ಗುರುವೇ, ನಿನ್ನನ್ನು ಗೌರವಿಸುವವರು ನೀನು ಏನೇ ಹೇಳಿದರೂ ಅದನ್ನು ನಂಬುತ್ತಾರೆ, ಮತ್ತು ನೀನು ಹೇಳಿದಂತೆಯೇಮಾಡುತ್ತಾರೆ. ಆದರೆ ನನ್ನಂತಹ ಜ್ಞಾನಿ ನಿನ್ನನ್ನು ಗೌರವಿಸುವುದಿಲ್ಲ. ನೀನು ಹೇಳಿದ ಹಾಗೆ ನಾನು ಕೇಳುವಂತೆ ಮಾಡಬಲ್ಲೆಯಾ?” ಎಂದುಸವಾಳನ್ನೆಸೆದ.  

ಅದಕ್ಕೆ ಬಾಂಕೈ ಬಹಳ ಶಾಂತವಾಗಿ ಆತನನ್ನು ಕುರಿತು “ದಯವಿಟ್ಟು ನನ್ನ ಬಳಿ ಬನ್ನಿ, ನಾನು ನಿಮಗೆ ತೋರಿಸುತ್ತೇನೆ” ಎಂದ. 

ಅಹಂಕಾರದಿಂದಲೇ ಆ ಗುರು ಸೇರಿದ್ದ ಸಭಿಕರನ್ನು ಸ್ವಲ್ಪ ಬದಿಗೆ ಸರಿಸಿ, ಬಾಂಕೈ ಕುಳಿತಿದ್ದ ಸ್ಥಳಕ್ಕೆ ಬಂದ.  

ನಗುತ್ತಲೇ ಬಾಂಕೈ ಆತನನ್ನು ತನ್ನ ಎಡಕ್ಕೆ ಬಂದು ಕುಳಿತುಕೊಳ್ಳುವಂತೆ ಹೇಳಿದ. ಆ ಗುರುವೂ ಅಂತೆಯೇ ಮಾಡಿದ. ಇನ್ನೇನು ಕುಳಿತಿಕೊಳ್ಳಬೇಕುಎನ್ನುವಷ್ಟರಲ್ಲಿ, “ಬಹುಷಃ ನೀವು ಎಡದಲ್ಲಿ ಕುಳಿತುಕೊಳ್ಳುವುದಕ್ಕಿಂತ ಬಾಲದಲ್ಲಿ ಕುಳಿತುಕೊಳ್ಳಿ” ಎಂದ. ಅದಕ್ಕೂ ಮರು ಮಾತನಾಡದೇ, ಗುರುವುಆತನ ಬಲ ಬದಿಗೆ ಬಂದು ಕುಳಿತ. 

ತನ್ನ ಮಂದಸ್ಮಿತ ಮುಖವನ್ನು ಹಾಗೆಯೇ ಇಟ್ಟುಕೊಂಡು, ಬಾಂಕೈ ಹೇಳಿದ, “ಈಗ ನೋಡಿ, ನೀವೊಬ್ಬ ಬಹಳ ಒಳ್ಳೆಯ ವ್ಯಕ್ತಿ ಅಂತ ನನಗನ್ನಿಸುತ್ತದೆ. ನಾನು ಹೇಳಿದ ಹಾಗೆಯೇ ನೀವು ಕೇಳುತ್ತಿದ್ದೀರಿ. ಇನ್ನೀಗ ಆರಾಮವಾಗಿ ಕುಳಿತುಕೊಳ್ಳಿ ಮತ್ತು ಭಾಷಣವನ್ನು ಕೇಳಿ” ಎಂದ. 

ಸಾಧಾರಣವಾಗಿ ನಮ್ಮನ್ನು ಯಾರೇ ಸ್ಪರ್ಧೆಗೆ ಆಹ್ವಾನಿಸಿದಾಗ, ನಾವು ಅವರು ಏನು ಹೇಳುತ್ತಾರೋ, ಅದಕ್ಕೆ ಪ್ರತಿಕ್ರಿಯೆಯನ್ನು ನೀಡಲುತೊಡಗುತ್ತೇವೆ. ಆದರೆ, ನಾವು ಪ್ರತಿಸ್ಪಂದನೆಯನ್ನು ಕೊಡಲು ಮರೆತುಬಿಡುತ್ತೇವೆ. 

ಹಾಗಾಗಿಯೇ, ಸವಾಲೆಸೆದ ವ್ಯಕ್ತಿಯನ್ನು ಹಾಗೆಯೇ ಎದುರಿಸಲು ತೊಡಗುತ್ತೇವೆಯೇ ಹೊರತು, ನಾವು ನಮ್ಮ ರೀತಿಯಲ್ಲಿ ಆ ವ್ಯಕ್ತಿಯನ್ನುಎದುರಿಸಲು ಪ್ರಯತ್ನಿಸುವುದಿಲ್ಲ. ಅಲ್ಲಿಯೇ ಎಷ್ಟೋ ಬಾರಿ ತಪ್ಪಾಗುವುದು. 

ಅಷ್ಟೊಂದು ಸಭಿಕರ ಎದುರು ಬಾಂಕೈಗೆ ಸವಾಲೆಸೆದಿದ್ದ ಆ ಗುರು. ಅದೂ ಕೂಡಾ ಆತನನ್ನು ಬಹಳ ಸ್ಥಿರವಾಗಿ ನಂಬುವಂತಹ ವ್ಯಕ್ತಿಗಳ ನಡುವೆ. ಆದರೆ, ಕಿಂಚಿತ್ತೂ ಚಂಚಳವಾಗದೆ, ತನ್ನ ಅದೇ ಶಾಂತ ಸ್ವಭಾವದಿಂದ ಸವಾಲನ್ನು ಸ್ವೀಕರಿಸಿದ ಕಾರಣ, ಬಾಂಕೈಗೆ ಗೆಲುವು ಕಷ್ಟವಾಗಲೇ ಇಲ್ಲ. 

ಜೀವನದಲ್ಲಿ ಸವಾಲುಗಳು ಬರುತ್ತಲೇ ಇರುತ್ತವೆ. ಬರಬೇಕು ಕೂಡಾ. ಆದರೆ ಅವುಗಳನ್ನು ಎದುರಿಸುವ ಧೈರ್ಯ ನಮ್ಮಲ್ಲಿರಬೇಕು. ಯಾವಾಗನಾವು ಯಾವುದೇ ಉದ್ವೇಗಕ್ಕೊಳಗಾಗದೇ ಸಮಸ್ಯೆಗಳನ್ನು ಎದುರಿಸುತ್ತೇವೋ, ಆವಾಗ ಅವುಗಳ ಜಟಿಲತೆಯನ್ನು ಸರಿಯಾಗಿಅವಲೋಕಿಸುವುದಕ್ಕೂ ಸಾಧ್ಯವಾಗುತ್ತದೆ, ಮತ್ತು ಬಿಡಿಸುವುದೂ ಕೂಡಾ ಸುಲಭ ಸಾಧ್ಯವಾಗುತ್ತದೆ. 

ಪರೀಕ್ಷೆಗಳಿರಲಿ, ಸ್ಪರ್ಧೆಗಳಿರಲಿ, ಅಥವಾ ಇನ್ಯಾವುದೇ ಪಣವಿರಲಿ, ನೀವು ನೀವಾಗಿದ್ದೇ ಸ್ಪರ್ಧೆ ಮಾಡಿದಲ್ಲಿ, ಗೆಲುವು ನಿಮ್ಮದಾಗುತ್ತದೆ. ಅದರಬದಲು ಎದುರಾಳಿಯ ಉಪಾಯಕ್ಕೆ ಬಲಿಯಾದರೆ, ಎಂಥವರಿಗೂ ಗೆಲುವು ಸಾಧ್ಯವಿಲ್ಲ. 

 

ಅಕ್ಷರ ದಾಮ್ಲೆ
ಮಾನಸಿಕ ತಜ್ಞ