ಒಮ್ಮೆ ಒಬ್ಬ ವಿದ್ಯಾರ್ಥಿ ಬಾಂಕೈ ಎಂಬ ಜ಼ೆನ್ ಗುರುವಿನ ಬಳಿ ಬಂದು “ಗುರುಗಳೇ, ನನಗೆ ಸಿಕ್ಕಾಪಟ್ಟೆ ಸಿಟ್ಟು ಬರುತ್ತದೆ. ನಾನು ಅದನ್ನು ಹೇಗೆ ಕಡಮೆಮಾಡಿಕೊಳ್ಳಬಹುದು?” ಎಂದು ಕೇಳಿದ. 

“ಓ, ನಿನ್ನಲ್ಲಿ ಅದೇನೋ ವಿಚಿತ್ರವಾದದ್ದು ಇದೆ! ಅದೇನು ಅಂತ ನಾನೊಮ್ಮೆ ನೋಡುತ್ತೇನೆ” ಎಂದರು ಗುರುಗಳು.  

“ಹಾಗೆ ನಿಮಗೆ ನಾನು ತೋರಿಸಲು ಸಾಧ್ಯವಿಲ್ಲ. ಈಗ ನನಗೆ ಕೋಪ ಬರುತ್ತಿಲ್ಲ” ಎಂದ ಶಿಷ್ಯ. 

“ಹಾಗಿದ್ದರೆ, ಯಾವಾಗ ನೀನು ನನಗೆ ನಿನ್ನ ಕೋಪವನ್ನು ತೋರಿಸಬಹುದು?” ಎಂದು ಮರು ಪ್ರಶ್ನೆ ಬಂತು. 

“ಅದು ಕೆಲವೊಮ್ಮೆ ಅಚಾನಕ್ಕಾಗಿ ಬರುತ್ತದೆ” ಎಂದ. 

ಅದಕ್ಕೆ ಪ್ರತಿಕ್ರಿಯೆಯಾಗಿ “ಹೂಂ, ಹಾಗಿದ್ದರೆ ಕೋಪ ನಿನ್ನ ಮೂಲ ಲಕ್ಷಣ ಅಲ್ಲ! ಇಲ್ಲವಾಗಿದ್ದರೆ, ನೀನು ನನಗೆ ನಿನ್ನ ಕೋಪವನ್ನು ಯಾವಾಗಬೇಕಾದರೂ ತೋರಿಸಬಹುದಿತ್ತು! ನೀನು ಹುಟ್ಟಿದಾಗ ನಿನಗೆ ಕೋಪ ಇರಲಿಲ್ಲ! ಅಥವಾ ನಿನ್ನ ತಂದೆ ತಾಯಿಯು ನಿನಗೆ ಕೋಪವನ್ನು ಕೊಡಲಿಲ್ಲ. ಯೋಚನೆ ಮಾಡು” ಅಂತ ಹೇಳಿದರು. 

ನಮ್ಮಲ್ಲಿ ಅದೆಷ್ಟೋ ಜನರಿಗೆ ಕೋಪ ಎನ್ನುವುದು ಒಂದು ಬಹಳ ದೊಡ್ಡ ಸಮಸ್ಯೆ! ಅನಗತ್ಯವಾಗಿ ಒಬ್ಬರು ಇನ್ನೊಬ್ಬರ ಮೇಲೆ ಎಗರಾಡುವುದು, ಅದರಕಾರಣದಿಂದಾಗಿ ಸಂಬಂಧಗಳನ್ನು ಹಾಳುಮಾಡಿಕೊಳ್ಳುವುದು ಮುಂತಾದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಇನ್ನೂ ಎರಡು ವರ್ಷತುಂಬದ ಮಗುವು ಕೂಡಾ ಕೋಪವನ್ನು ವಿವಿಧ ರೀತಿಯಲ್ಲಿ ಪ್ರಕಟಿಸುತ್ತದೆ. ಆರಂಭದಲ್ಲಿ ಅಸಮಾಧಾನ ಇದ್ದದ್ದು ಆಮೇಲೆ ಕೋಪವಾಗಿತಿರುಗುತ್ತದೆ. 

ಕೋಪ ಯಾಕೆ ಬರುತ್ತದೆ, ಎಲ್ಲಿಂದ ಬರುತ್ತದೆ? 

ಬಾಂಕೈ ಅವರು “ತಂದೆ ತಾಯಿ ನಿನಗೆ ಕೊಟ್ಟಿಲ್ಲ” ಅಂತ ಹೇಳಿದರೂ, ಎಷ್ಟೋ ಸಲ ಮಗು ತಂದೆ ತಾಯಿಯನ್ನು ನೋಡಿಯೇ ಕಲಿತಿರುವಸಾಧ್ಯತೆಗಳು ಹೆಚ್ಚು. ತಂದೆ ತಾಯಿ ಅಲ್ಲದಿದ್ದರೆ, ಇತರೆ ಮನೆಯ ಮಂದಿಗಳೂ ಕೂಡಾ ಮಗುವಿನ ಮೇಲೆ ಪ್ರಭಾವ ಬೀರಬಹುದು. 

ಆಲ್ಬರ್ಟ್ ಬಂಡ್ಯೂರಾ ಎನ್ನುವ ಮಾನಸಿಕ ತಜ್ಞನ ‘ಸಾಮಾಜಿಕ ಮಾದರಿ’ ತತ್ವದ ಪ್ರಕಾರ ನಾವು ಇತರರನ್ನು ನೋಡಿ ಬಹಳಷ್ಟು ವಿಷಯಗಳನ್ನುಕಲಿಯುತ್ತೇವೆ. ಅನೇಕ ಬಾರಿ ನಮಗೆ ಅರಿವಿಲ್ಲದಂತೆಯೇ ನಮಗೆ ಕೋಪ ಬಂದಿರುತ್ತದೆ. ಮತ್ತು ಆ ಕೋಪದ ಭರದಲ್ಲಿ ನಾವು ಏನೇನೋ ಮಾತನಾಡಿಬಿಡುತ್ತೇವೆ. ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಅಂತ ಒಂದು ಗಾದೆ ಮಾಅಟಿದೆ. ಆದ್ದರಿಂದ ನಾವು ಎಂತಹಪರಿಸ್ಥಿತಿಯಲ್ಲೇ ಇರಲಿ, ನಾವು ಮಾತನಾಡುತ್ತಿದ್ದೇವೆ ಎನ್ನುವುದರ ಪೂರ್ಣ ಗಮನ ನಮ್ಮಲ್ಲಿರಬೇಕು. 

ಇತ್ತೀಚೆಗಿನ ಒತ್ತಡದ ಜೀವನದಲ್ಲಿ ಅನೇಕರಿಗೆ ಇತರ ಕಾರಣಗಳಿಂದ ಇನ್ಯಾವುದೋ ಕಾರಣಗಳ ಮೇಲೆ ಕೋಪ ಬರುವುದುಂಟು. ರಸ್ತೆಯಲ್ಲಿಟ್ರಾಫಿಕ್ ಇದ್ದ ಕಾರಣ ಮನಸ್ಸು ಕೆರಲಿದ್ದಾರೆ, ಅದನ್ನು ಮನೆಯ ಮಂದಿಯ ಮೇಲೆ ತೀರಿಸಿಕೊಳ್ಳುವವರು ಅನೇಕರಿದ್ದರು! ಕೆಲವೊಮ್ಮೆ ಇತರರಮೇಲಿನ ಕೋಪವನ್ನು ತನ್ನ ಮೇಲೆಯೇ ಹೇರಿಕೊಳ್ಳುವವರು ಇದ್ದಾರೆ.  

ಕೋಪ ಬರುವುದು ಮಾನಸಿಕ ಖಾಯಿಲೆಯೇ?

ನವರಸಗಳ ಆಧಾರದ ಮೇಲೆ ನೋಡಿದರೆ, ಕೋಪವನ್ನು ರೌದ್ರ ರಸ ಅಂತಲೂ ಕರೆಯಬಹುದು. ಅಂದರೆ ಕೋಪ ಅನ್ನುವುದು ಒಂದು ರಸ! ಅದುಕೆಲವು ಸಂದರ್ಭಕ್ಕನುಸಾರವಾಗಿ ಬರಬಹುದು. ಸನ್ನಿವೇಶಕ್ಕೆ ಸರಿಯಾಗಿ ಕೋಪ ಬಂದರೆ ಅದು ಮಾನಸಿಕ ಖಾಯಿಲೆಯಲ್ಲ! ಆದ್ರೆ ಸರಿಯಾದಕಾರಣವಿಲ್ಲದೆ ಕೋಪ ಬರುತ್ತದಾದರೆ, ಮತ್ತು ಯಾವಾಗಲೂ ಒಬ್ಬ ವ್ಯಕ್ತಿ ಕೋಪದಲ್ಲಿರುತ್ತಾನಾದರೆ, ಖಂಡಿತವಾಗಿಯೂ ಅದಕ್ಕೆ ಶುಶ್ರೂಷೆಯನ್ನುಪಡೆಯಲೇಬೇಕು. ಆದರೆ ಕೋಪವನ್ನು ಹೇಗೆ ಸಂಭಾಳೀಸುತ್ತೀರಿ ಎನುವುದು ಬಹಳ ಮುಖ್ಯ. 

ಕೋಪವನ್ನು ಯಾವುದೇ ಹಿಂಸೆ ಇಲ್ಲದೆ ಇತರರಿಗೆ ತಿಳಿಸುವುದಕ್ಕೆ ಸಾಧ್ಯವಾದರೆ ಆವಾಗ ನಿಮ್ಮ ಕೋಪಕ್ಕೆ ಹೆಚ್ಚಿನ ಮಾನ್ಯತೆ ಬರುತ್ತದೆ. ಮತ್ತು ಆಮೂಲಕ ಇತರರ ತಪ್ಪು ವರ್ತನೆಗಳನ್ನು ತಿದ್ದಲು ಸಾಧ್ಯವಿದೆ. ಹಾಗಾಗಿ ಕೋಪವನ್ನು ಹೇಗೆ ಸೌಮ್ಯವಾಗಿಯೇ ತಿಳಿಸುವುದು ಎಂಬುದು ಒಂದು ಕಲೆ. ಅದನ್ನು ಕರಗತ ಮಾಡಿಕೊಂಡರೆ ನಿಮ್ಮ ಕೋಪ ನಿಮಗೆ ಕೆಡುಕನ್ನು ತರದು! 

 

ಅಕ್ಷರ ದಾಮ್ಲೆ
ಮಾನಸಿಕ ತಜ್ಞ