ಕಸನ್ ಎಂಬ ಒಬ್ಬ ಆಧ್ಯಾತ್ಮಿಕ ಗುರುವಿಗೆ ಆತ ವಾಸವಾಗಿದ್ದ ಪ್ರಾಂತ್ಯದ ದೊರೆಯ ಅಂತ್ಯಸಂಸ್ಕಾರವನ್ನು ಮಾಡಲು ಅರಮನೆಯಿಂದ ಕರೆ ಬಂತು. ಆತ ಅಲ್ಲಿಯವರೆಗೂ ಯಾವುದೇ ರಾಜರನ್ನಾಗಲೀ, ರಾಜ ಮನೆತನದವರನ್ನಾಗಲಿ ಭೇಟಿ ಮಾಡಿರಲಿಲ್ಲ. ಹಾಗಾಗಿ ಆತನ ಮನಸ್ಸಿನಲ್ಲಿ ವಿಪರೀತಭಯ ಉಂಟಾಯಿತು. ಯಾವಾಗ ಸಂಸ್ಕಾರದ ಕಾರ್ಯಕ್ರಮಗಳು ಆರಂಭವಾದುವೋ ಆತ ಸಿಕ್ಕಾಪಟ್ಟೆ ಬೆವರಿ ಹೋದ. 

ಕಾರ್ಯಕ್ರಮಗಳು ಮತ್ತು ನಡೆಯಬೇಕಾದ ವಿಧಿಗಳು ಸಾಂಗವಾಗಿ ನೆರವೇರಿದುವು. ಮರಳಿ ತನ್ನ ಆಶ್ರಮವನ್ನು ತಲುಪಿದ ಕೂಡಲೇ ಆತ ತನ್ನಶಿಷ್ಯತ್ವವನ್ನು ಪಡೆದ ಎಲ್ಲರನ್ನೂ ಬಳಿಗೆ ಕರೆದ. ಅವರನ್ನುದ್ದೇಶಿಸಿ, “ನಾನಿನ್ನೂ ಗುರುವಾಗುಡುವುದಕ್ಕೆ ಅರ್ಹನಲ್ಲ ಎಂದು ನನಗೆ ಇಂದು ತಿಳಿಯಿತು. ನನ್ನಲ್ಲಿ ಮೊದಲಿನಿಂದಲೂ ಇದ್ದ ಪ್ರಖ್ಯಾತಿಯ ಮೋಹ ಇನ್ನೂ ಇದೆ. ಹಾಗಾಗಿ ನಾನು ನಿಮಗೆ ಪಾಠ ಮಾಡಬಾರದು” ಎಂದ. 

ಅಷ್ಟು ಹೇಳಿದವನೇ, ತನ್ನ ಆಶ್ರಮವನ್ನು ತ್ಯಜಿಸಿ, ಇನ್ನೊಬ್ಬ ಗುರುವಿನ ಶಿಷ್ಯತ್ವವನ್ನು ಪಡೆದು ಅಲ್ಲಿ ನಿರಂತರವಾಗಿ ಮುಂದಿನ ಎಂಟು ವರ್ಷಗಳ ಕಾಲಅಭ್ಯಾಸ ಮತ್ತು ಅಧ್ಯಯನವನ್ನು ನಡೆಸಿದ. ಆ ನಂತರ ಮರಳಿ ತನ್ನ ಹಿಂದಿನ ಶಿಷ್ಯರ ಬಳಿಗೆ ಬಂದ, ಗುರುವಾಗುವ ಸಂಪೂರ್ಣ ಅರ್ಹತೆಯನ್ನುಸಾಧಿಸಿಕೊಂಡು. 

ಈ ರೀತಿ ತನ್ನ ಶಿಷ್ಯರ ಮುಂದೆ ತನ್ನ ನ್ಯೂನತೆಗಳನ್ನು ಒಪ್ಪಿಕೊಳ್ಳುವುದಕ್ಕೆ ಬಹಳ ಧೈರ್ಯ ಬೇಕು. ಒಬ್ಬ ಗುರುವಾದ ಮಾತ್ರಕ್ಕೆ ಎಲ್ಲವನ್ನೂತಿಳಿದಿರಬೇಕಾಗಿಲ್ಲ. ಆದರೆ ಕೆಲವು ಮೂಲ ಲಕ್ಷಣಗಳನ್ನು ಹೊಂದಿರಬೇಕು. ಒಂದು ವೇಳೆ ಅವುಗಳೇ ಇಲ್ಲದಿದ್ದಾಗ ಅವನ್ನು ಒಪ್ಪಿಕೊಳ್ಳಬೇಕು. 

ಇದು ಇತರ ವೃತ್ತಿಗಳಿಗೂ ಅನ್ವಯವಾಗುವಂತಹ ವಿಷಯವೇ! ನಾವು ಯಾವುದೇ ವೃತ್ತಿಯಲ್ಲಿರಲಿ, ಎಲ್ಲವೂ ನಮಗೆ ತಿಳಿದಿರಬೇಕಾಗಿಲ್ಲ. ಒಂದುವೇಳೆ ನಮಗೆ ತಿಳಿದಿಲ್ಲವಾದರೆ ಅದನ್ನು ಒಪ್ಪಿಕೊಳ್ಳುವುದು ದಡ್ಡತನವಾಗುವುದಿಲ್ಲ, ಬದಲಾಗಿ ದೊಡ್ಡತನವಾಗುತ್ತದೆ. ನೀವು ನಿಮ್ಮ ಕ್ಷೇತ್ರದಲ್ಲಿಎಂತಹ ತಜ್ಞತೆಯನ್ನೇ ಗಳಿಸಿರಬಹುದು. ಆದರೂ ಎಷ್ಟೋ ವಿಷಯಗಳು ನಮಗೆ ಗೊತ್ತಿರದೇ ಇರಬಹುದು. ಅಂಥವನ್ನು ಗೊತ್ತಿರುವವರಿಂದಕಲಿತುಕೊಳ್ಳುವುದು ಸೌಜನ್ಯ. ಆ ವಿನಯವನ್ನು ಇಟ್ಟುಕೊಂಡಾಗಲೇ ನಾವು ಬೆಳೆಯುತ್ತೇವೆ. 

“ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೇ ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆಎಲ್ಲರೊಳಗೊಂದಾಗು ಮಂಕುತಿಮ್ಮ” ಎಂಬ ಡಿವಿಜಿಯವರ ಕಗ್ಗವನ್ನು ನಾವು ಯಾವತ್ತು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತೇವೋ, ಆವಾಗನಮ್ಮ ಜೀವನ ಸರಳವಾಗುತ್ತದೆ. ಖ್ಯಾತಿ, ಹೆಸರು ಇವುಗಳ ಹಿಂದೆ ಹೋಗುವುದಕ್ಕಿಂತ ನಿಜವಾದ ಸಾಧನೆ ಮಾಡುವುದರ ಕುರಿತು ನಾವು ಗಮನಹರಿಸಬೇಕು. ನಿಮ್ಮ ಸಾಧನೆಗಳ ಕುರಿತು ಸಂತಸವಿರಲಿ. ಅದನ್ನು ಇತರರೊಂದಿಗೆ ಹಂಚಿಕೊಳ್ಳಿ ಕೂಡಾ! ಆದರೆ ಅದರ ಜೊತೆಗೆ ಅಹಂಕಾರ ಬೇಡ. 

ನೀವು ಎಷ್ಟು ಸಹಜವಾಗಿರುತ್ತೀರೋ, ಅಷ್ಟು ಜನರಿಗೆ ಹತ್ತಿರವಾಗುತ್ತೀರಿ. ನೀವು ಎಷ್ಟು ಪ್ರಾಮಾಣಿಕರಾಗಿರುತ್ತೀರೋ, ಅಷ್ಟು ಕೃತಕತೆಯಿಂದಕಳಚಿಕೊಳ್ಳುತ್ತೀರಿ. ಜೊತೆಗೆ ಅಪರಾಧಿ ಪ್ರಜ್ಞೆಯಿಂದಲೂ ದೂರವಾಗುತ್ತೀರಿ. 

ಕಸಾನ್ ನಿಂದ ಕಲಿತುಕೊಳ್ಳುವುದಕ್ಕೆ ಇನ್ನೂ ಒಂದು ವಿಷಯ ಇದೆ. ಆತ ತನ್ನ ನ್ಯೂನತೆಯನ್ನು ಗುರುತಿಸಿಕೊಂಡದ್ದು ಮತ್ತು ಒಪ್ಪಿಕೊಂಡದ್ದುಮಾತ್ರವಲ್ಲ. ಅದನ್ನು ಮೆಟ್ಟಿನಿಲ್ಲಲು ಸಾಧನೆಯನ್ನು ಮಾಡಿದ. ಆಮೇಲೆ ತಾನು ಯಾರ ಬಳಿ ತನ್ನ ದುರ್ಬಲತೆಯನ್ನು ಹಂಚಿಕೊಂಡಿದ್ದನೋ, ಅವರಬಳಿ ಬಂದು ತಾನು ಗಳಿಸಿದ್ದ ಪರಿಪೂರ್ಣತೆಯನ್ನೂ ಹಂಚಿಕೊಂಡ. ತನ್ಮೂಲಕ ತನ್ನ ಹೊಣೆಗಾರಿಕೆಯನ್ನೂ ಪ್ರಕಟಪಡಿಸಿದ. 

ಒಂದು ವೇಳೆ ನಾವೆಲ್ಲರೂ ಈ ಧೈರ್ಯವನ್ನು ಬೆಳೆಸಿಕೊಂಡಿದ್ದೇ ಆದರೆ, ನಾವು ಒಬ್ಬರಿಗೊಬ್ಬರು ಪರಸ್ಪರ ಸಹಾಯ ಮಾಡಿಕೊಂಡು, ಎಲ್ಲರ ಏಳಿಗೆಗೆಕಾರಣರಾಗಬಹುದು. ಯಾವತ್ತೂ ‘ನಾನು’ ಎಂಬ ಅಹಂಕಾರವನ್ನು ಕಳಚಿ ‘ನಾವು’ ಎಂಬ ಮನಸ್ಥಿತಿಯನ್ನು ಹೊಂದುತ್ತೇವೋ, ಆವಾಗ ಸಮಾಜಬೆಳೆಯುತ್ತದೆ. ಒಬ್ಬರನ್ನೊಬ್ಬರು ಗೇಲಿ ಮಾಡುವುದು, ಕೆಳಕ್ಕೆ ತಳ್ಳುವುದು ಮುಂತಾದುವುಗಳು ಕಡಮೆಯಾಗಿ, ಸೌಹಾರ್ದತೆ ಸ್ಥಾಪಿತವಾಗುತ್ತದೆ. 

 

 

ಅಕ್ಷರ ದಾಮ್ಲೆ
ಮಾನಸಿಕ ತಜ್ಞ